ನೀನ್ಯಾಕೋ ನಿನ್ನ ಹಂಗ್ಯಾಕೋ
ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ ||ಪ||
ಕರಿಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲವೆಂಬೋ ನಾಮವೆ ಕಾಯ್ತೊ ||ನೀನ್ಯಾಕೋ||
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ ||ನೀನ್ಯಾಕೋ||
ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ ||ನೀನ್ಯಾಕೋ||
ನಾರಿಯನೆಳೆತಂದು ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೊ ||ನೀನ್ಯಾಕೋ||
ಯಮನ ದೂತರು ಬಂದು ಅಜಮಿಳನೆಳೆವಾಗ
ನಾರಾಯಣ ಎಂಬೋ ನಾಮವೇ ಕಾಯ್ತೋ ||ನೀನ್ಯಾಕೋ||
ಹಸುಳೆ ಆ ಧ್ರುವರಾಯ ಅಡವಿಗೆ ಪೋದಾಗ
ವಾಸುದೇವನೆಂಬೋ ನಾಮವೆ ಕಾಯ್ತೊ ||ನೀನ್ಯಾಕೋ||
ನಿನ್ನ ನಾಮಕೆ ಸರಿ ಕಾಣೆನೊ ಜಗದೊಳು
ಘನ್ನ ಮಹಿಮ ಸಿರಿ ಪುರಂದರವಿಠಲ ||ನೀನ್ಯಾಕೋ||
Comments
Post a Comment