ಹರಿ ಕುಣಿದ
ಹರಿ ಕುಣಿದ ನಮ್ಮ ಹರಿ ಕುಣಿದ || ಪ ||
ಅಕಳಂಕ ಚರಿತ ಮಕರ ಕುಂಡಲಧರ
ಸಕಲರ ಪಾಲಿಪ ನಮ್ಮ ಹರಿ ಕುಣಿದ || ಹರಿ ||
ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ|| ಹರಿ ||
ಅಂದುಗೆ ಅರಳೆಲೆ ಬಿಂದುಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ || ಹರಿ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟಕಾಂತಿಯ ದಾಪು
ದಿಟ್ಟ ಮಲ್ಲರ ಗಂಡ ಹರಿ ಕುಣಿದ || ಹರಿ ||
ಪರಮ ಭಾಗವತ ಕೇರಿಯೊಳಗಾಡುವ
ಪುರಂದರ ವಿಠಲ ಹರಿ ಕುಣಿದ || ಹರಿ ||
Comments
Post a Comment