ನಂಬದಿರು ಈ ದೇಹ
ನಂಬದಿರು ಈ ದೇಹ ನಿತ್ಯವಲ್ಲ
ಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ||ಪ||
ಎಲುಬು ರಕ್ತಮಾಂಸಗಳು ಮೇಲೆ ಚರ್ಮದ ಹೊದಿಕೆ |
ಒಳಗೆ ಮಲ ಮೂತ್ರ ಕ್ರಿಮಿರಾಶಿ ಇಹವು ||
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು|
ಬುಲು ದೇಹವ ನೆಚ್ಚಿ ಕೆಡಬೇಡ ಮನವೆ||ನಂಬದಿರು||
ಸತಿ ಸುತರು ಹಿತರೆಂದು ಮತಿ ಮರೆತು ಮಮತೆಯಲಿ|
ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು||
ಸತತ ಲಕ್ಷ್ಮೀಪತಿಯ ಶರಣೆನ್ನದಿಹಪರದ|
ಗತಿ ಶೂನ್ಯನಾಗಿ ನೀ ಕೆಡಬೇಡ ಮನವೆ||ನಂಬದಿರು||
ಪರರ ನಿಂದಿಸದೆ ಪರ ವಧುಗಳನು ಬಯಸದೆ|
ಗುರು ವಿಪ್ರ ಸೇವೆಯನು ಮಾಡು ಬಿಡದೆ||
ಹರಿ ಸ್ತುತಿಯ ನೀ ಕೇಳು ಹರಿ ಕೀರ್ತನೆಯ ಪಾಡು|
ಸಿರಿ ಪುರಂದರವಿಠಲನೊಲಿದು ಪಾಲಿಸುವ||ನಂಬದಿರು||
Comments
Post a Comment