ನೀ ಮಾಯೆಯೊಳಗೊ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ|| ಪ ||
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ |
ನಯನ ಬುದ್ಧಿಯ ಒಳಗೋ ಬುದ್ಧಿ ನಯನದ ಒಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || ನೀ ||
ಸವಿಯು ಸಕ್ಕರೆಯೊಳಗೊ' ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ |
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || ನೀ ||
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಆಘ್ರಾಣದೊಳಗೊ|
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ ||ನೀ ||
Comments
Post a Comment