ಮೆಲ್ಲ ಮೆಲ್ಲನೆ ಬಂದನೆ
ಮೆಲ್ಲ ಮೆಲ್ಲನೆ ಬಂದನೆ, ಗೋಪ್ಯಮ್ಮ ಕೇಳೆ
ಮೆಲ್ಲ ಮೆಲ್ಲನೆ ಬಂದನೆ ||
ಮೆಲ್ಲ ಮೆಲ್ಲನೆ ಬಂದು, ಗಲ್ಲಕ್ಕೆ ಮುತ್ತ ಕೊಟ್ಟು
ನಿಲ್ಲದೆ ಓದಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಪ||
ಹಾಲು ಮಾರಲು ಪೋದರೆ,
ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ |
ಹಾಲ ಸುಂಕವ ಕೇಳಿ ಕೋಲನ್ನೆ ಅಡ್ಡಕಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ ||ಮೆಲ್ಲ||
ಮೊಸರ ಮಾರಲು ಪೋದರೆ,
ನಿನ್ನಯ ಕಂದ ಹೆಸರೇನೆಂದು ಕೇಳಿದ |
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದ ಕೃಷ್ಣ ||ಮೆಲ್ಲ||
ಹೋಗಿರೆ ರಂಗಯ್ಯನ,
ಮೇಲೆ ನೀವು ದೂರೇನು ಕೊಂಡು ಬಂದಿರೆ |
ಯೋಗೀಶ ಪುರಂದರ ವಿಠಲ ರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ ||ಮೆಲ್ಲ||
Comments
Post a Comment