ಕಂಡು ಕಂಡು ನೀ ಎನ್ನ
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ||ಪ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ |
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||ಕಂಡು||
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ನೊಂದೆ ನಾನು |
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||ಕಂಡು||
ಭಕ್ತವತ್ಸಲನೆಂಬ ಬಿರುದು ಪೊತ್ತ ಮೇಲೆ
ಭಕ್ತರಾಧೀನನಾಗಿ ಇರಬೇಡವೆ |
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||ಕಂಡು||
Comments
Post a Comment